ಬುಧವಾರ, ಡಿಸೆಂಬರ್ 21, 2011

ಹೀಗೊಂದು ಪೀಠಿಕೆ

ಹೀಗೊಂದು ಪೀಠಿಕೆ

ರಾಜಕೀಯ ನನಗೆ ಗೊತ್ತಿಲ್ಲ
ಆದರೆ ಗಾದಿಯಲ್ಲಿ ಕೂತವರ ಹೆಸರುಗಳೆಲ್ಲಾ ಗೊತ್ತು
ಹೇಳಲೇನು ಪಟ ಪಟನೆ ಅವರ ಹೆಸರುಗಳನೆಲ್ಲಾ
ನೆಹರುವಿನಿಂದ ಹಿಡಿದು,
ವಾರದ ಹೆಸರುಗಳಂತೆ
ಮಾಸಗಳ ಹೆಸರುಗಳಂತೆ!

ಭಾರತೀಯಳು ನಾನು,ಹುಟ್ಟೂರು ಮಲಬಾರು
ಕಡುಕಂದು ಬಣ್ಣ,ಆಡಬಲ್ಲೆ ಮೂರು ಭಾಷೆ
ಎರಡರಲ್ಲಿ ಬರೆಯುತ್ತೇನೆ,ಒಂದರಲ್ಲಿ ಕನಸು ಕಾಣುತ್ತೇನೆ.

ಅವರೆಂದರು: ಇಂಗ್ಲಿಷಲ್ಲ ನಿನ್ನ ಮಾತೃಭಾಷೆ, ಬರೆಯಬೇಡ ನೀನು ಇಂಗ್ಲೀಷಿನಲ್ಲಿ.
ಏಕೆ ಬಿಡುವುದಿಲ್ಲ ಇವರು ನನ್ನ ಪಾಡಿಗೆ ನನ್ನ
ಅಯ್ಯಾ ವಿಮರ್ಶಕರೆ,ಸ್ನೇಹಿತರೆ, ಮನೆಗೆ ಬರುವ ಸೋದರ ಸಂಬಂಧಿಗಳೆ,ಒಬ್ಬೊಬ್ಬರೂ ಕೇಳಿ,ಬಿಟ್ಟುಬಿಡಿ ನನ್ನ
ನಾನೇಕೆ ಮಾತನಾಡಬಾರದು ನನ್ನಿಷ್ಟದ ಭಾಷೆಯಲ್ಲಿ
ನಾನಾಡುವ ನುಡಿಯೇ ನನ್ನ ಭಾಷೆ
ತಿರುಚಿರಲಿ ಮುರಿಚಿರಲಿ ಅದಷ್ಟೂ ನನ್ನದೇ ನನ್ನದು ಮಾತ್ರ.
ಗೊತ್ತು ನನಗೆ! ಅದು ಅರ್ಧ ಇಂಗ್ಲೀಷು ಅರ್ಧ ದೇಶೀಯ
ವಿಚಿತ್ರವೇನೋ ಸರಿ ಆದರೆ ಪ್ರಾಮಾಣಿಕ
ನಾನೆಷ್ಟು ಮನುಷ್ಯಳೋ ಅಷ್ಟೇ ಅದು ಮನುಷ್ಯಭಾಷೆ
ನೋಡಿ,ಅದರಲ್ಲಿ ನನ್ನ ಸುಖ ಸಂತೋಷ,ಬಯಕೆ ಭರವಸೆ ಗಳನ್ನೆಲ್ಲ ಹೇಳಬಲ್ಲೆ
ಕಾಗೆಗೆ ಅದರ ಕಾಕಾ ಹೇಗೋ
ಸಿಂಹಕ್ಕೆ ಅದರ ಗರ್ಜನೆ ಹೇಗೋ ಹಾಗೆ ಉಪಯುಕ್ತ ಇದು ನನಗೆ
ಇದು ಮನುಷ್ಯ ಭಾಷೆ,ಅಲ್ಲೆಲ್ಲೋ ಇರದ ಇಲ್ಲೆ ಇರುವ ಮನದ ಭಾಷೆ
ಮಳೆಗೆ ಸಿಕ್ಕು ನಲಗುವ ಮರದ ಕೆಪ್ಪ ಕುರುಡು ಭಾಷೆಯಲ್ಲ
ಮುಂಗಾರು ಮೋಡದ ಅಥವಾ ಸೋನೆ ಮಳೆಯ
ಅಥವಾ ಉರಿವ ಚಿತೆಯ ಅರ್ಥವಾಗದ ಗೊಣಗಾಟವೂ ಅಲ್ಲ
ನೋಡುವ ಕೇಳುವ ನಿತ್ಯ ಜಾಗೃತ ಮನದ ಭಾಷೆ.

ಮೂಲ:ಕಮಲಾದಾಸ್
ಅನುವಾದ: ಜೈ ಕುಮಾರ್ ಮರಿಯಪ್ಪ