ಶುಕ್ರವಾರ, ಏಪ್ರಿಲ್ 17, 2015

ನಮ್ಮ ಹಿತ್ತಲ ಮರಗಳು-ಜಗಳಗಂಟಿಮರ


http://indiabiodiversity.org/biodiv/img/Diospyros%20chloroxylon/Diospyros_cordifolia_unripe_fruit.jpg


ಜಗಳಗಂಟಿಮರ

Diospyros cordifolia 



ಇದು ಒಂದು ಸ್ವಾರಸ್ಯಕರ ಕನ್ನಡದ ಮರ.ಹೆಸರೇನು ಗೊತ್ತೆ-ಜಗಳಗಂಟಿ ಮರ. ಹೆಸರೇನೋ ಪ್ರಸಿದ್ದ ಆದರೆ ಯಾಕೆ ಇಂಥ ಹೆಸರು ಬಂತು. ವಿಚಾರಿಸಿ ಕೇಳಿದರೆ ಏನೇನೋ ಕಥೆ ಹೇಳುವವರುಂಟು. ಪಾಂಡವರಿಗೂ ಕೌರವರಿಗೂ ಸಂಬಂಧ ಕಲ್ಪಿಸಿದವರುಂಟು.ಆದರೆ ಚಿಕ್ಕಂದಿನಲ್ಲಿ ನಾನು ಇದರ ಜನಪದ ಕಥೆ ಕೇಳಿದ್ದರಿಂದ ಅದನ್ನು ದಾಖಲಿಸುವುದು ಸೂಕ್ತ ಎಂದು ಈ ಬ್ಲಾಗ್ ಬರೆಯುತಿದ್ದೇನೆ.
1958 ರ ಸುಮಾರು ಲಿಂಗನಮಕ್ಕಿಯ ಕಾಡಿನಲ್ಲಿ ಆಫಿಸರ್ ಮನೆ ನಮ್ಮದು. ನನಗೆ ಆಗ 6-7 ವರ್ಷ ಇರಬೇಕು ಮಳೆಗಾಲಕ್ಕೆ ಬೇಕಾದಷ್ಟು ಒಣ ಸೌದೆ ಕಾರ್ ಷೆಡ್ನಲ್ಲಿ ತುಂಬಿರುತಿತ್ತು (ಕಾರ್ ಷೆಡ್ ಇತ್ತು ಕಾರು ಇರಲಿಲ್ಲ). ಕಾಡು ತೆರವು ಮಾಡಿದಾಗ  ಕೆಳಗುರುಳಿ ಬಿದ್ದ ಮರಗಳೇ ಸಾಕು ಸೌದೆ ಒಟ್ಟಲು. ಜಡಿ ಮಳೆ ಬಂದರೆ ಚಾತುರ್ಮಾಸವೇ ಸರಿ. ಮನೆ ಹೊರಗೆ ಹೋಗುವಂತಿಲ್ಲ .ನಮ್ಮಮ್ಮನಿಗೆ ಬೇರೆ ಕೆಲಸವಿರುತ್ತಿರಲಿಲ್ಲ ನಮಗೆಲ್ಲಾ ಅಭ್ಯಂಜನ ಮಾಡಿಸಿದ್ದೇ ಮಾಡಿಸಿದ್ದು.ಸೀಗೆಕಾಯಿ ಹರಳೆಣ್ಣೆಗೂ ಕೊರತೆ ಇರಲಿಲ್ಲ  ಕಾಡಲ್ಲಿ ದೊರೆತ ಹರಳಿನಿಂದಲೇ ಕಮ್ಮನೆ ಹರಳೆಣ್ಣೆ ಮನೆಯಲ್ಲಿ ಇರುತಿತ್ತು,ಸೀಗೆಕಾಯಿ ನೆನಸಿ ಬೆಳ್ಳಂಬೆಳಗ್ಗೆಯೇ ರುಬ್ಬಿಟ್ಟಿರುತಿದ್ದರು. ನೀರು ಸಮೃದ್ದ ಸೂರಿನ ನೀರನ್ನೆ ದೋಣಿಯಲ್ಲಿ ಹರಿಸಿ ದೊಡ್ಡ ಸಿಮೆಂಟ್ ಟ್ಯಾಂಕ್ ತುಂಬರಿಸುತ್ತಿದ್ದರು
ಹಂಡೆ ಒಲೆ ಸದಾ ನಿಗಿನಿಗಿ ಉರಿಯುತಿತ್ತು ಅದರದ್ದೆ ಕೆಂಡ ಎಳೆದು ಅದೂ ಇದು ಸುಟ್ಟು ತಿನ್ನುತ್ತಿದ್ದೆವು.
ಒಂದು ದಿನ ಬಚ್ಚಲೊಲೆಯಿಂದ ಪಟ ಪಟ ಪಟಾಕಿ ಸದ್ದು ಬಂತು. ಪಟಾಕಿ ಯೆಂದರೆ ಡಾಂಡೂಂ ಸದ್ದಲ್ಲ ಲೇಡಿ ಪಟಾಕಿ ಅಥವಾ ಕುದರೆ ಪಟಾಕಿ ಸರ ಹಚ್ಚಿದ ಹಾಗೆ ಇಲ್ಲವೆ ಕೇಪನ್ನು ಹೊಡೆದ ಹಾಗೆ. ನಾವೆಲ್ಲ ಮೋಜಿನಿಂದ ಒಲೆ ಬಳಿಸೇರಿದೆವು. ಹಿಂದಿನಿಂದ ಬಂದ ನಮ್ಮಮ್ಮ ಅಯ್ಯೋ ಯಾರೋ ಜಗಳಗಂಟಿ ಮರ ಕಡಿದು ಸೌದೆ ತಂದಿದ್ದಾರೆ ಅದು ಮುಗಿಯುವವರೆಗೆ ಹೀಗೇ ಪಟಾಕಿ ಸದ್ದು ಎಂದು ನಗಲಾರಂಬಿಸಿದರು. ಇದೇನಿದು ಇಂಥ ಹೆಸರು ಎಂದಾಗ ಸ್ವಾರಸ್ಯಕರ ಕಥೆ ಹೇಳಿದರು.
ಅದೊಂದು ಹಳ್ಳಿ. ಇಬ್ಬರು ಅಣ್ಣ ತಮ್ಮಂದಿರು. ಹೆಂಡತಿಯರ ಕಾರಣ ಪಾಲಾಗಿ ಗುಡಿಸಲಲ್ಲೆ ಅಡ್ಡಗೋಡೆ ಹಾಕಿ ಬೇರೆ ಬೇರೆ ಒಲೆ ಹಾಕಿಕೊಂಡು ಜೀವನ ಮಾಡುತ್ತಿದ್ದರು. ಗಂಡಸರು ಕಷ್ಟ ಜೀವಿಗಳು ಶ್ರಮ ಜೀವಿಗಳು ಕಷ್ಟಪಟ್ಟು ಎಳ್ಳು ಬೆಳೆದಿದ್ದರು. ಎಳ್ಳು ವಾಣಿಜ್ಯ ಬೆಳೆ. ರೈತನಿಗೆ ಬಹಳ ಹಣ ತಂದುಕೊಡುವ ಬೆಳೆ.  ಆ ಕಾಲಕ್ಕೆ ಎಲ್ಲರೂ ಎಳ್ಳೆಣ್ಣೆಯನ್ನೇ ಬಳಸುತಿದ್ದರು (ಎಳ್+ನೆಯ್= ಎಣ್ಣೆ, ತಿಲದಿಂದ ಬಂದದ್ದು ತೈಲ) ಚೆನ್ನಾಗಿ ಧಾರಣೆ ಬಂದಾಗ ಗಾಣಿಗನಿಗ ಮಾರುವ ಎಂದು ಅಣ್ಣತಮ್ಮಂದಿರು ಎಳ್ಳು ಶೇಖರಿಸಿದ್ದರು.

ದೊಡ್ಡ ಸೊಸೆ ನಿಧಾನಸ್ಥೆ ಜತನ ದಿಂದ ಸಂಸಾರ ಮಾಡುತಿದ್ದಳು. ಚಿಕ್ಕವಳು ಹೊಟ್ಟೆಕಿಚ್ಚಿನ ಹೆಂಗಸು . ಒಮ್ಮೆ ದೊಡ್ಡವನು ಕಾಡಿನಿಂದ ಸೌದೆ ತರುವಾಗ   ಜಗಳಗಂಟಿ ಮರವನ್ನೂ ಕಡಿದು ತಂದಿದ್ದನು. ದೊಡ್ಡವಳು ಅಡಿಗೆಗೆ ಒಲೆಗೆ ಹಾಕಿದಾಗ ಅದರ ಬುದ್ದಿ ಅದು ತೋರಿಸಿತು. ಪಟ ಪಟ ಸದ್ದು . ಪಕ್ಕದ ಮನೆಯಲ್ಲಿ ಏನಿದು ಸದ್ದು! ಹೋಗಿ ನೋಡುವಂತಿಲ್ಲ ಆಡಿ ಕೇಳುವಂತಿಲ್ಲ. ಕಿರಿಯಳಿಗೆ ಕಸಿವಿಸಿಯೋ ಕಸಿವಿಸಿ. ಎರಡು ಮೂರು ದಿನ ಯೋಚಿಸಿದಳು.ಆಗ ಹೊಳೆಯಿತು ! ತನ್ನ ಗಂಡ ಇಲ್ಲದ ಹೊತ್ತಿನಲ್ಲಿ ದೊಡ್ಡ ಸೊಸೆ (ಓರಗಿತ್ತಿ) ಎಳ್ಳು ಹುರಿದು ತಿನ್ನುತಿದ್ದಾಳೆ.ಅದಕ್ಕೆ ಹಾಗೆ ಸೊಂಪಾಗಿದ್ದಾಳೆ. ನಾನೇನು ಕಡಿಮೆ ಎಂದು
ಕಿರಿ ಸೊಸೆ ತಾನನೂ ದಿನಾಲೂ ಮುಷ್ಟಿ ಮುಷ್ಟಿ ಎಳ್ಳನ್ನು ಹುರಿದು ತಿಂದಳು.ಸೊಂಪಾಗಿಯೂ ಆದಳು. ಎಷ್ಟು ಎಂದರೆ ಗಂಡ ಹೊಡೆದರೂ ತಡೆದುಕೊಳ್ಳುವಷ್ಟು . ಆ ದಿನವೂ ಬಂದೇ ಬಿಟ್ಟಿತು.ಗಾಣಿಗ ಸೆಟ್ಟಿ ಒಳ್ಳೆ ಧಾರಣೆ ಕೊಡುತ್ತೀನೆಂದು ಮನೆ ಬಾಗಿಲಿಗೆ ಬಂದ ಅಣ್ಣ ಬುದ್ದಿವಂತ ಚೌಕಾಶಿ ಮಾಡಿ ದರ ನಿಗದಿ ಮಾಡಲಿ ಎಂದು ಅಣ್ಣನ ಮನೆಗೇ ಶೆಟ್ಟಿಯನ್ನು ಕಳುಹಿಸಿದ ತಮ್ಮ. ತಮಾಷೆ ನೋಡೋಣ ಎಂದು ಚಿಕ್ಕ ಸೊಸೆ ಹೊರಬಂದಳು.ಓರಗಿತ್ತಿ ಮೊದಲು ಏಟು ತಿನ್ನಲಿ ತನ್ನ ಸರದಿ ಬಂದಾಗ ನೋಡೋಣ ಎಂದು ಕೊಂಡಳು . ಅಣ್ಣ ತನ್ನ ಮನೆಗೆ ಒಂದಿಷ್ಟು ಇಟ್ಟುಕೊಂಡು  ಎಲ್ಲಾ ಸರಕು ಮಾರಿದ.   ಗಾಡಿಗೆ ಏರಿದ ಮೂಟೆ ನೋಡಿ

ಚಿಕ್ಕ ಸೊಸೆ ಎದೆ ಗಕ್ಕಂದಿತು . ತಮ್ಮ ಧಾರಣೆ ದರ ಕೇಳಿಕೊಂಡು ಎಳ್ಳು  ಇಟ್ಟಿದ್ದ ದೊಡ್ಡ ಮಡಿಕೆ ನೋಡಿದರೆ ಏನಿದೆ. ಮೂರೋ ನಾಲ್ಕೋ ಸೇರು. ಕೆಂಗಣ್ಣು ಬಿಟ್ಟು ಕೇಳಿದಾಗ ತಾನೆ ಹುರಿದು ತಿಂದೆ ಎಂದು ಒಪ್ಪಿದಳು. ಇದಕ್ಕೆಲ್ಲ ಓರಗಿತ್ತಿಯೇ ಕಾರಣ ಎಂದು ದೂರಿದಳು ಹೆಂಡತಿಯನ್ನುಚೆನ್ನಾಗಿ ತದುಕಿದನಂತರ ಆದ ನಷ್ಟದ ದುಗುಡ ತಾಳಲಾರದೆ ಪಂಚಾಯತಿಯಲ್ಲಿ ಅಣ್ಣ ಅತ್ತಿಗೆಯ ಮೇಲೆ ತಮ್ಮ ದೂರನ್ನು ನೀಡಿದನು.ಪಂಚಾಯತಿ  ಪರಿಶೀಲಿಸಲಾಗಿ ಜಗಳಗಂಟಿ ಮರದ ರಹಸ್ಯ ಹೊರಬಿತ್ತು.
ಆ ಜಾತಿಯ ಮರವನ್ನು ಕಡಿದು ಯಾರೂ ಸೌದೆ ಆಗಿ ಬಳಸಬಾರದೆಂದು ಎಲ್ಲರಿಗೂ ತಾಕೀತು ಮಾಡಿದರು . ಈಗ ಯಾರೂ ಅದನ್ನು ಸೌದೆಯಾಗಿ  ಬಳಸುವುದಿಲ್ಲ.

ಅಂದಿನಿಂದ ಜಗಳಗಂಟಿ ಮರ ಎಂಬ ಹೆಸರು ಈ ಮರಕ್ಕೆ ಬಂತು. ಮೊದಲು ಏನು ಹೆಸರಿತ್ತೊ ಗೊತ್ತಿಲ್ಲ. ಕಿಟ್ಟಲ್ ತಿನ್ದುಕ,  ಸ್ಫೂರ್ಜಕ, ಕಾಲಸ್ಕಂದ, ತಿತಸಾರಕ ಅಂದರೆ ತುಂಬರ ಗಿಡ, ತೂಬರೆಗಿಡ ಎಂಬ ಹೆಸರನ್ನು ನೀಡಿ . ಇದನ್ನು ಜಗಳದಮರವೆಂದು ಕೆಲವರು ಅನ್ನುವರು ಎಂದು ಬರೆದಿದ್ದಾರೆ.

ಕರ್ನಾಟಕ ಸಸ್ಯ ಸಂಪದದಲ್ಲಿ Diospyros montana ಎಂದು ಪ್ರಭೇದ ನಾಮ ಬರೆದಿದ್ದು-ಬುಲಗನಿ,ಕಾಲಾಗೊಂಡಾ,ಜಗಳಗಂಟಿ,ಬಿಲ್ಕುನಿಕ, ಕಲ್ನಂದಿ ಗೋಯಿಂಡು,ಕಾಲುಕತ್ತಿ ಎಂಬ ಹೆಸರನ್ನು ನೀಡಲಾಗಿದೆ.ಇದರ ಹಿಚುಕಿದ ಎಲೆ ಮತ್ತು ಫಲ ಮೀನ ವಿಷ ಎಂದು, ಕಟ್ಟಿಗೆಯನ್ನು ಮನೆಯಲ್ಲಿಟ್ಟರೆ ಜಗಳವಾಗುವುದೆಂಬ ಭಾವನೆ ಇದೆ ಎಂದು ಲೇಖಕ S.F.ಉಪ್ಪಿನ ಬರೆದಿದ್ದಾರೆ.
ಇಂಗ್ಲಿಷ್ ಹೆಸರು Green ebony parsiman ಎಂಬ ಹೆಸರಿದೆ.
ಇದನ್ನು ಕನ್ನಡದ ಮರ ಎಂದೆ ಆದರೆ ಇದು ಮಹಾರಾಷ್ಟ್ರ,ತಮಿಳುನಾಡು,ಆಂದ್ರಪ್ರದೇಶದಲ್ಲೂ ಬೆಳೆಯುತ್ತದೆ.ಆದರೆ ಜಗಳಗಂಟಿ ಎಂಬ ಹೆಸರು ಕರ್ನಾಟಕಕ್ಕೆ ಸೀಮಿತ.
ಚಿತ್ರಕೃಪೆ:http://indiabiodiversity.org/species/show/265560.
.


ಮಂಗಳವಾರ, ಸೆಪ್ಟೆಂಬರ್ 11, 2012

ಒಂದು ಗಿಣಿಯ ಕಥೆ

ರವೀಂದ್ರನಾಥ ಟಾಗೂರ್
ಕನ್ನಡಕ್ಕೆ : ಜೈಕುಮಾರ್ ಮರಿಯಪ್ಪ
ಒಂದಾನೊಂದು ಕಾಲದಲ್ಲಿ ಒಂದು ಗಿಣಿ ಇತ್ತು. ಅದೊಂದು ಬಲು ಹುಂಬ ಹಕ್ಕಿ. ಅದು ಹಾಡು ಹಾಡುತ್ತಿತ್ತು ಅಷ್ಟೇಆದರೆ ವೇದ ಶಾಸ್ತ್ರಗಳ ಪರಿಚಯವೇ ಅದಕ್ಕಿರಲಿಲ್ಲಅದು ಕೇವಲ ಹಾರುತ್ತಿತ್ತು  ಕುಣಿಯುತ್ತಿತ್ತು. ಆದರೆ ಶಿಷ್ಟಾಚಾರ ಮತ್ತು ರೀತಿ ರಿವಾಜುಗಳೇ ಅದಕ್ಕೆ ಗೊತ್ತಿರಲಿಲ್ಲ. ನಾಡಿನ ರಾಜನೋ ಬೇಸತ್ತು  "ಇಂಥ ಹಕ್ಕಿಗಳು ಏತಕ್ಕೂ ಪ್ರಯೋಜನವಿಲ್ಲಬರಿ ಹಣ್ಣು ತಿನ್ನಲು ಸರಿಇವುಗಳಿಂದ ರಾಜನ ತೋಟವೂ ಹಾಳುಪೇಟೆಯಲ್ಲೂ ಹಣ್ಣಿಗೂ ಬರ ಬರುತ್ತದೆ." ಎಂದು ಹೇಳಿದ. ಇದಕ್ಕೆ ಏನಾದರೂ ಪರಿಹಾರ ಮಾಡಬೇಕು ಎಂದು
     ತನ್ನ ಮಂತ್ರಿಯನ್ನು ಕರೆದು " ಮೊದಲು ಗಿಣಿಗೆ ವಿದ್ಯಾಭ್ಯಾಸ ಮಾಡಿಸು."  ಎಂದು ಆಜ್ಞೆ ನೀಡಿದ.
     ಗಿಣಿಗೆ ವಿದ್ಯಾಭ್ಯಾಸ ಮಾಡಿಸುವ ಜವಾಬ್ದಾರಿ ರಾಜನ ಸೋದರಳಿಯನ ಮೇಲೆ ಬಿತ್ತು.
     ಎಲ್ಲಾ ವಿದ್ವಾಂಸರು ಕುಳಿತು ಗಹನವಾದ ಚರ್ಚೆ ನಡೆಸಿದರು. ಚರ್ಚೆಯವಿಷಯ ಗಿಳಿಯು ಇಷ್ಟು ಮೂರ್ಖ ಹಕ್ಕಿ ಆಗಲು ಕಾರಣವೇನು?
     ಕಡೆಗೊಂದು ತೀರ್ಮಾನಕ್ಕೆ ಬಂದರು"ಪುಳ್ಳೆ ಕಡ್ಡಿ ಗಳು ಮತ್ತು ಹುಲ್ಲಿನಿಂದ ಪಕ್ಷಿ ಕಟ್ಟುವ ಗೂಡಿನಲ್ಲಿ ಅಷ್ಟೊಂದು ಜ್ಞಾನವನ್ನು ಶೇಖರಿಸಲು ಸಾಧ್ಯವಿಲ್ಲಆದರಿಂದ ಮೊದಲಿಗೆ ಅದಕ್ಕೊಂದು ಉತ್ತಮವಾದ ಪಂಜರವನ್ನು  ನಿರ್ಮಿಸಬೇಕು".
     ವಿದ್ವಾಂಸರಿಗೆ ಸೂಕ್ತ ಬಹುಮಾನ ನೀಡಲಾಯಿತುಅವರು ಸಂತೃಪ್ತರಾಗಿ ಮನೆಗೆ ಹೋದರು.
     ಅಕ್ಕಸಾಲಿಗನೊಬ್ಬ ಪಂಜರವನ್ನು ನಿರ್ಮಿಸಲಾರಂಭಿಸಿದಪಂಜರ ಬಲು ಸುಂದರವಾಗಿತ್ತುಅದನ್ನು ನೋಡಲು ಜನರು ಎಲ್ಲೆಲ್ಲಿಂದಲೋ ಬರಲಾರಂಭಿಸದರು .
     ಒಬ್ಬ ಹೇಳಿದ " ವಿದ್ಯೆ ಎಂದರೆ ಇದು ! "  ಇತರರು ಹೇಳಿದರು " ವಿದ್ಯೆನೋ ಅಲ್ಲವೋ ಅಂತೂ ಗಿಣಿಗೊಂದು ಒಳ್ಳೆ ಪಂಜರ ಸಿಕ್ತು ಬಿಡಿ. ಬಲು ಅದೃಷ್ಟವಂತ ಗಿಣಿ! "
     ಅಕ್ಕಸಾಲಿಗಂತೂ ಯಥೇಚ್ಛ ಬಹುಮಾನ ನೀಡಿದರುಆತ ಸಂತೃಪ್ತನಾಗಿ ಮನೆಗೆ  ನಡೆದನು.
     ಪಂಡಿತನು ಗಿಣಿಗೆ ವಿದ್ಯಾಭ್ಯಾಸ ಮಾಡಿಸಲು ಬಂದನು. "ವಿದ್ಯಾಭ್ಯಾಸಕ್ಕೆ ಅಲ್ಪ ಸ್ವಲ್ಪ ಪುಸ್ತಕಗಳು ಸಾಲುವುದಿಲ್ಲ." ಎಂದನು.
     ರಾಜನ ಸೋದರಳಿಯ ಲಿಪಿಕಾರರನ್ನು ಕರೆಸಿದನುಅವರು ದೊಡ್ಡ ದೊಡ್ಡ ಗ್ರಂಥಗಳನ್ನು ಪ್ರತಿ ಮಾಡಿದರು ಪ್ರತಿಗಳಿಂದ ಇನ್ನೊಂದಷ್ಟು ಪ್ರತಿ ಮಾಡಿ ಗ್ರಂಥಗಳ ರಾಶಿಯನ್ನೇ ನಿರ್ಮಿಸಿದರುನೋಡಿದವರೆಲ್ಲಾ " ಅಬ್ಬಬ್ಬಾ  ನೋಡು ವಿದ್ಯೆ ತುಂಬಿ ತುಳುಕುತ್ತಿದೆ" ಎಂದರು
     ಲಿಪಿಕಾರರಿಗೂ ಬಂಡಿಗಟ್ಟಳೆ ಬಹುಮಾನ ಸಿಕ್ಕಿತುಕೂಡಲೆ ಎಲ್ಲಾ ತಮ್ಮ ಮನೆಗೆ ದೌಡಾಯಿಸಿದರುಅವರ ಮಕ್ಕಳು ಮರಿ ಇಡೀ ಸಂತತಿಯೇ  ಕುಳಿತು ತಿನ್ನುವಷ್ಟು ಸಂಪತ್ತು ದೊರಕಿತ್ತು.
     ರಾಜನ ಸೋದರಳಿಯನು ಸುಮ್ಮನೆ ಕೂತಿರಲಿಲ್ಲಅಂಥ ಅಮೂಲ್ಯ ಪಂಜರದ ಕಾವಲು ಮತ್ತು ನಿರ್ವಹಣೆಯ ಜವಾಬ್ದಾರಿ ಅವನ ಮೇಲಿತ್ತುಆಗಾಗ್ಗೆ ರಿಪೇರಿ ಮಾಡಿಸ ಬೇಕಿತ್ತುಅಷ್ಟೇ ಅಲ್ಲ ಪಂಜರವನ್ನು ತೊಳೆದು ಶುದ್ಧ ಮಾಡಿ ಪಾಲೀಶು ಮಾಡ ಬೇಕಿತ್ತು"ಇದಪ್ಪಾ ಸುಧಾರಣೆ ಎಂದರೆ" ಎಂದು ಎಲ್ಲರೂ ತಲೆದೂಗಿದರುಪಂಜರದ ಉಸ್ತುವಾರಿಗೆಂದೇ ಅನೇಕ ಜನರನ್ನು ನೇಮಿಸಲಾಯಿತುಅವರ ಮೇಲೆ ಮೇಲ್ವಿಚಾರಣೆ ಮಾಡಲು ಇನ್ನೂ  ಅನೇಕರನ್ನು ನೇಮಿಸಲಾಯಿತುಪ್ರತಿಯೊಬ್ಬರಿಗೂ ಪ್ರತಿ ತಿಂಗಳೂ ಮುಷ್ಟಿ ತುಂಬ ನಾಣ್ಯ ದೊರಕುತ್ತಿತ್ತುಅವರ ಪೆಠಾರಿಗಳು ತುಂಬಿ ತುಳುಕಿದವುಅವರು, ಅವರ ಅಣ್ಣ ತಮ್ಮಂದಿರು, ಅಕ್ಕತಂಗಿಯರು, ಬಂಧು ಬಳಗದವರು ಸುಖ ಸಮೃದ್ಧಿಯಿಂದ ಜೀವನ ನಡೆಸಿದರು.
     ಪ್ರಪಂಚದಲ್ಲಿ ಏನಾದರೂ ಇರಲಿ ಬಿಡಲಿ. ಆದರೆ ಎಲ್ಲದರಲ್ಲೂ ಹುಳುಕು ಕಂಡು ಹಿಡಿದು ಕೊಂಕು ನುಡಿಯುವರಿಗಂತೂ ಎಂದೂ ಕಡಿಮೆ ರುವುದಿಲ್ಲಅವರು ಆಡಿಕೊಳ್ಳಲು ಪ್ರಾರಂಭಿಸಿದರು"ಪಂಜರ ಏನೋ ಥಳಥಳ ಎನ್ನುತ್ತಿದೆಆದರೆ ಹಕ್ಕಿ ಕಥೆ ಏನಾಯಿತಯ್ಯ?  ಯಾರೂ ನೋಡುವವರೇ ಇಲ್ಲವಲ್ಲ!".   ಕೊಂಕು ಮಾತು ರಾಜನ ಕಿವಿಗೂ ಬಿತ್ತುಆತ ಸೋದರಳಿಯನನ್ನು  ಕರೆದು " ಏನಯ್ಯ ಇದು ರೀತಿ ಮಾತನಾಡುತ್ತಿದ್ದಾರೆ" ಎಂದನು.
     ಸೋದರಳಿಯ ಹೇಳಿದ "ಮಹಾಸ್ವಾಮಿ ! ಸತ್ಯ ಏನು ಎಂದು ತಿಳಿಯಬೇಕಿದ್ದರೆ ದಯವಿಟ್ಟು ಅಕ್ಕಸಾಲಿಯನ್ನು ಕರೆಸಿ, ಪಂಡಿತರು-ಲಿಪಿಕಾರರನ್ನು ಕರೆಸಿ, ರಿಪೇರಿ ಮಾಡುವವನನ್ನು ಮತ್ತು ಮೇಲ್ವಿಚಾರಕರನ್ನು ಕರೆಸಿ ಕೇಳಿ ನೋಡಿಕೊಂಕು ಮಾತನಾಡುವವರಿಗೇನು ಸ್ವಾಮಿ ಎರಡು ಹೊತ್ತು ಹಿಟ್ಟಿಗೆ ಗತಿಯಿಲ್ಲದಿದ್ದರೂ ಬಾಯಿಗೆ ಬಂದದ್ದು ಮಾತನಾಡುತ್ತಾರೆ."
     ರಾಜನಿಗೆ ಎಲ್ಲವೂ ಸ್ಪಷ್ಟವಾಯಿತುಕೊರಳಿಂದ ಚಿನ್ನದ  ಕಂಠೀಹಾರವನ್ನು ತೆಗೆದು ಸೊದರಳಿಯನಿಗೆ ಹಾಕಿ ತನ್ನ  ಸೋದರಳಿಯನನ್ನು ಸನ್ಮಾನಿಸಿದನು.
     ಯಾವ ಶರವೇಗದಲ್ಲಿ ವಿದ್ಯಾಭ್ಯಾಸ ನಡೆಯುತ್ತಿದೆ ಎಂಬುದನ್ನು ಕಣ್ಣಾರೆ ನೋಡಲು ರಾಜನು  ಇಚ್ಛಿಸಿದನುಆದ್ದರಿಂದ  ಒಂದು ದಿನ ತನ್ನ ಸ್ನೇಹಿತರು, ಪರಿವಾರ ಮತ್ತು ಸಭಾಸದರ ಸಮೇತ  ವಿದ್ಯಾ ಕೇಂದ್ರಕ್ಕೆ ಹಾಜರಾದನುರಾಜ ಬಾಗಿಲಿಗೆ ಬಂದದ್ದೇ ತಡ ಗಂಟೆಗಳು, ಭೇರಿಗಳು ಮೊಳಗಿದವುಕೊಳಲು, ವೀಣೆ, ಪಿಟೀಲು, ಸಿತಾರ, ತಾಳ ದ್ದಳೆ ಮುಂತಾದ ಅನೇಕ ವಾದ್ಯಗಳು ನುಡಿದವುಪಂಡಿತರೋ ತಮ್ಮ ಜುಟ್ಟನ್ನು ಮೇಲೇರಿಸಿ ಉಚ್ಚ ಕಂಠದಲ್ಲಿ ವೇದಘೋಷ ಮಾಡತೊಡಗಿದರುರಿಪೇರಿ ಮಾಡುವವರು, ಕಾರ್ಮಿಕರು, ಅಕ್ಕಸಾಲಿಗ, ಲಿಪಿಕಾರರು, ಮೇಲ್ವಿಚಾರಕರು ಮತ್ತು ದಾಯಾದಿ ಮಿತ್ರರು ರಾಜನನ್ನು  ಜಯಘೋಷದಿಂದ ಸ್ವಾಗತಿಸಿದರು" ಮಹಾಪ್ರಭು ತಮ್ಮ ಅಭಿಪ್ರಾಯವೇನು?" ಎಂದು ಸೋದರಳಿಯನು ಕೇಳಿದನು "ಅದ್ಭುತ, ಮಹಾನ್ ಅದ್ಭುತ! ಇದೇನು ಸಾಮಾನ್ಯ ಶಬ್ದಘೋಷವೇ? " ಎಂದನು ಮಹಾರಾಜ
" ಇದು ಕೇವಲ ಶಬ್ದ ಘೋಷ ಮಾತ್ರವಲ್ಲ ಮಹಾಸ್ವಾಮಿ ಇದಕ್ಕಾಗಿ ಸಾಕಷ್ಟು ಶ್ರಮ ಮತ್ತು ಹಣವೂ ವಿನಿಯೋಗ ಆಗಿದೆ"  ಎಂದನು ಸೋದರಳಿಯ.
     ರಾಜನು ಪೂರ್ಣ ಸಂಪ್ರೀತನಾಗಿ ಹಿಂದಿರುಗಲು ಸಿದ್ಧನಾದನುಅವನು ಮುಂಬಾಗಿಲಿಗೆ ಬಂದು ಇನ್ನೇನು ಆನೆಯ ಅಂಬಾರಿಯನ್ನು ಹತ್ತುವುದರಲ್ಲಿದ್ದನು. ಆಗ ಪೊದೆ ಹಿಂದೆ ಅಡಗಿ ಕುಳಿತಿದ್ದ ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುವ ಕುಹಕಿಯೊಬ್ಬ ಕೂಗಿ ಹೇಳಿದನು" ಮಹಾ ಪ್ರಭು, ಹಕ್ಕಿಯನ್ನು ನೋಡಿದಿರಾ! " ರಾಜ ಬೆಚ್ಚಿ ಬಿದ್ದನು. " ಹೌದಲ್ಲಾ! ನಾನು ಮರತೇ ಬಿಟ್ಟಿದ್ದೇ. ಹಕ್ಕಿಯನ್ನೇ ನೋಡಲಿಲ್ಲವೇ?" ಅಂದು ಕೊಂಡು ಮತ್ತೇ ಒಳಗೆ ಹೋಗಿ ಪಂಡಿತನಿಗೆ ಹೇಳಿದನು  " ನೀವು ಹೇಗೆ ವಿದ್ಯಾಭ್ಯಾಸ ಮಾಡಿಸುತ್ತೀರಿ  ಎಂಬುದನ್ನು ನಾನು ನೋಡ ಬೇಕಲ್ಲಾ ! "ಎಂದನು.
     ವಿದ್ಯಾಭ್ಯಾಸದ ರೀತಿಯನ್ನು ಕಣ್ಣಾರೆ ನೋಡಿದನುಅವನಿಗೆ ಮಹದಾನಂದವಾಯಿತುಹಕ್ಕಿಗಿಂತಲೂ ಪಾಠವನ್ನು ಮಾಡುವ ರೀತಿಯೇ ಬಹಳ ಮನೋಜ್ಞ ವಾಗಿತ್ತುಎಷ್ಟು ಅಂದರೆ,  ಗಿಣಿಯ ಕಡೆಗೇ ಯಾರ ಗಮನವೂ ಹೋಗುತ್ತಿರಲಿಲ್ಲಾಅಲ್ಲಾ  ಅಷ್ಟಕ್ಕೂ ಹಕ್ಕಿ ಕಡೆಗಾದರೂ ಯಾಕೆ ನೋಡಬೇಕು ಹೇಳಿ !"  ವ್ಯವಸ್ಥೆಯಲ್ಲಿ ಯಾವುದೇ ನ್ಯೂನತೆ ಇಲ್ಲ ಎಂಬುದು ರಾಜನಿಗೆ ಮನವರಿಕೆಯಾಯಿತುಪಂಜರದಲ್ಲಿ  ಯಾವ ಕಾಳು ಕಡ್ಡಿಯೂ ಇರಲಿಲ್ಲನೀರೂ ಇರಲಿಲ್ಲಪಂಜರದ ತುಂಬ ಅನೇಕ ಗ್ರಂಥಗಳಿಂದ ಹರಿದ ಹಾಳೆಗಳಿದ್ದವುಲೇಖನಿಯ ತುದಿಯಿಂದ ಹಾಳೆಗಳನ್ನು ಹಕ್ಕಿಯ ಬಾಯಿಗೆ ತುರುಕಿ ಅದರ ಹೊಟ್ಟೆ ತುಂಬಿಸುತ್ತಿದ್ದರುಹಾಡುವುದಿರಲಿ ಕೂಗುವುದಕ್ಕೂ ಹಕ್ಕಿಯ ಬಾಯಲ್ಲಿ ಜಾಗವಿರಲಿಲ್ಲಎಂಥ ಸುಂದರ ದೃಶ್ಯ!
     ಈಗ ಆನೆಯ ಅಂಬಾರಿ ಏರುವ ಮುನ್ನ ರಾಜನು ಕಿವಿ ಕೀಳುವ ತಜ್ಞನನ್ನು ಕರೆಸಿ ಕೊಂಕು ನುಡಿಯ ಕುಹಕಿಯ ಕಿವಿಯನ್ನು ಜೋರಾಗಿ ಕೀಳಲು ಆಜ್ಞೆ ಮಾಡಿದನು.
 ನಿರೀಕ್ಷಿಸಿದಂತೆ, ಬಲು ಗೌರವಾನ್ವಿತವಾಗಿ ಗಿಣಿಯು ಅರೆ ಜೀವವಾಯಿತುದಿನಗಳು ಹೀಗೆ ಕಳೆದವುಅದರ ಪಾಲಕರಿಗೆ ಪರಿಸ್ಥಿತಿ ಆಶಾದಾಯಕವಾಗಿ ಕಂಡಿತುಆದರೇನು ಮಾಡುವುದು ಗಿಳಿಯು ತನ್ನ ಕೆಟ್ಟ ಚಾಳಿಯನ್ನು ಬಿಡಬೇಕಲ್ಲ! ಅರೆ ಜೀವವಾದರೂ  ಗಿಳಿಯು ಮುಂಜಾವಿನ ಸೂರ್ಯನನ್ನು   ಕಂಡು ಆಕ್ಷೇಪಾರ್ಹವಾಗಿ  ರೆಕ್ಕೆ ಬಡಿಯುತ್ತಿತ್ತು. ಕೆಲವೊಂದು ದಿನ ಅದು ತನ್ನ ರೋಗಿಷ್ಠ ಕೊಕ್ಕುಗಳಿಂದ ಪಂಜರದ ಕಂಬಿಗಳನ್ನು  ಮುರಿದು ಹೊರಬರಲು ಪ್ರಯತ್ನಿಸುತ್ತಿತ್ತು.
ಆಡಳಿತಗಾರನು  "ಎಂಥ ದುರಹಂಕಾರ"  ಎಂದನುಕೂಡಲೇ ಕಮ್ಮಾರನೊಬ್ಬ ಶಿಕ್ಷಣ ಇಲಾಖೆಗೆ ತನ್ನ ತಿದಿ ಒಲೆ ಮತ್ತು ಸುತ್ತಿಗೆ, ಉಳಿಗಳೊಂದಿಗೆ ಬಂದನುಎಷ್ಟು ಕುಶಲತೆಯಿಂದ ಕೆಲಸಮಾಡಿದ ಎನ್ನುತ್ತೀರಿ. ಶೀಘ್ರವೇ ಕಬ್ಬಿಣದ ಸರಪಳಿಯನ್ನು ತಯಾರಿಸಿ ಬಿಟ್ಟನು ಮತ್ತು ಹಕ್ಕಿಯ ರೆಕ್ಕೆಯನ್ನು ಕತ್ತರಿಸಿ ಹಾಕಲಾಯಿತು
     ರಾಜನ ಬಂಧುಗಳಂತೂ ಗಂಭೀರವದನರಾಗಿ " ನೀವೇ ನೋಡಿ! ನಾಡಿನಲ್ಲಿ ಗಿಣಿಗಳು ಮೂಢ ಹಕ್ಕಿಗಳಷ್ಟೇ ಅಲ್ಲ ಅವಕ್ಕೆ ಎಳ್ಳಷ್ಟೂ ಕೃತಜ್ಞತೆ ಇಲ್ಲ " ಎಂದು ಬೇಸರದಿಂದ ತಲೆ ಆಡಿಸಿದರು.  ನಂತರ ಪಂಡಿತರು ಒಂದು ಕೈಯಲ್ಲಿ ಲೇಖನಿ ಇನ್ನೊಂದರಲ್ಲಿ ಭರ್ಜಿ ಹಿಡಿದು ಬಂದು ವಿದ್ಯಾಭ್ಯಾಸ ಎಂದರೆ ಇದೇ ಎಂದು ಹೇಳಬಹುದಾದ ಕಾರ್ಯವನ್ನು ಮಾಡಿದರು.
     ಕಮ್ಮಾರನಿಗೂ ಕೈ ತುಂಬ ಹಣ ಬಂತುಅವನ ಹೆಂಡತಿ ಮೈತುಂಬ ಒಡವೆ ತೊಟ್ಟಳುರಾಜನು ಆಡಳಿತಗಾರನಿಗೆ ಅವನ ಸಮಯ ಪ್ರಜ್ಞೆ ಮತ್ತು ಜಾಗೃತಿಯನ್ನು ಮೆಚ್ಚಿ ಬಿರುದುಗಳನ್ನು ಪ್ರದಾನ ಮಾಡಿದನು.

 ಗಿಣಿಯು ತನ್ನ  ಪ್ರಾಣ ಬಿಟ್ಟಿತುಯಾವಾಗ ಎಂಬುದು ಯಾರಿಗೂ ಗೊತ್ತಿಲ್ಲ ಕುಹಕಿ ಕೊಂಕುಗಾರ ಮಾತ್ರ ಕೂಡಲೇ  ಗಿಣಿ  ಸತ್ತು ಹೋಯಿತು  ಎಂದು ಎಲ್ಲೆಡೆ  ಸುದ್ದಿಯನ್ನು ಹರಡಿದನು
     ರಾಜ ತನ್ನ ಸೋದರಳಿಯನನ್ನು ಕರೆದು  " ಏನಪ್ಪಾ ಅಳಿಯ! ಏನಿದು ನಾನು ಕೇಳುತ್ತಿರುವುದು?"  ಎಂದು  ಕೇಳಿದನುಅಳಿಯ ಹೀಗೆ ಹೇಳಿದನು " ಮಹಾ ಪ್ರಭು ಗಿಣಿಯ ವಿದ್ಯಾಭ್ಯಾಸ ಇಲ್ಲಿಗೆ ಮುಗಿದಿದೆ."
 "ಅದು ಇನ್ನೂ ಕುಣಿಯುತ್ತದೆಯೇ?"  ರಾಜ ಕೇಳಿದನು
" ಛೆ! ಛೆ! ಎಲ್ಲಾದರೂ ಉಂಟೆ" ಅಳಿಯ ಹೇಳಿದನು.
  " ಅದು ಹಾರುತ್ತದೆಯೇ?"
" ಇಲ್ಲವೇ  ಇಲ್ಲ."
" ಹಾಡುಹಾಡುತ್ತದೆಯೇ"
 "ಇಲ್ಲ ಸ್ವಾಮಿ"
 "ಆಹಾರ ಬೇಕು ಎಂದು ಗಲಾಟೆ ಮಾಡುತ್ತದೆಯೇ?"  
"ಇಲ್ಲ ಮಹಾಸ್ವಾಮಿ"
"ಗಿಣಿಯನ್ನು ಇಲ್ಲಿ ತನ್ನಿ ನಾನು ನೋಡ ಬೇಕು" ಎಂದು ರಾಜನು ಹೇಳಿದನು.
ಹಕ್ಕಿಯನ್ನು ತರಲಾಯಿತುಜೊತೆಗೆ ಆಡಳಿತಗಾರ, ಕಾವಲುಗಾರರು ಮತ್ತು ಅಶ್ವಾರೋಹಿಗಳೂ ಬಂದರುರಾಜನು ಗಿಣಿಯನ್ನು ಮುಟ್ಟಿದನುಅದು ಬಾಯಿ ತೆಗೆಯಲಿಲ್ಲಒಂದು ನುಡಿಯನ್ನೂ ಆಡಲಿಲ್ಲಅದರ ಹೊಟ್ಟೆಯಲ್ಲಿ ತುರುಕಿದ್ದ ಪುಸ್ತಕಗಳ ಪುಟಗಳು ಸರ ಸರ ಸದ್ದು ಮಾಡಿದವು ಅಷ್ಟೆ.

ಹೊರಗಡೆ ತೆಂಕಣ ತಂಗಾಳಿ, ಹೂ ಅರಳಿದ ವನಗಳು ವಸಂತಾಗಮನವನ್ನು ಸೂಚಿಸುತ್ತಿದ್ದವು. ಚಿಗುರೆಲೆಗಳ  ನಿಟ್ಟುಸಿರು ಮುಗಿಲು ಮುಟ್ಟಿತು.