ಜಗಳಗಂಟಿಮರ
Diospyros cordifolia
ಇದು ಒಂದು ಸ್ವಾರಸ್ಯಕರ ಕನ್ನಡದ ಮರ.ಹೆಸರೇನು ಗೊತ್ತೆ-ಜಗಳಗಂಟಿ ಮರ. ಹೆಸರೇನೋ ಪ್ರಸಿದ್ದ
ಆದರೆ ಯಾಕೆ ಇಂಥ ಹೆಸರು ಬಂತು. ವಿಚಾರಿಸಿ ಕೇಳಿದರೆ ಏನೇನೋ ಕಥೆ ಹೇಳುವವರುಂಟು. ಪಾಂಡವರಿಗೂ ಕೌರವರಿಗೂ ಸಂಬಂಧ
ಕಲ್ಪಿಸಿದವರುಂಟು.ಆದರೆ ಚಿಕ್ಕಂದಿನಲ್ಲಿ ನಾನು ಇದರ ಜನಪದ ಕಥೆ ಕೇಳಿದ್ದರಿಂದ ಅದನ್ನು ದಾಖಲಿಸುವುದು ಸೂಕ್ತ ಎಂದು
ಈ ಬ್ಲಾಗ್ ಬರೆಯುತಿದ್ದೇನೆ.
1958 ರ ಸುಮಾರು ಲಿಂಗನಮಕ್ಕಿಯ ಕಾಡಿನಲ್ಲಿ ಆಫಿಸರ್ ಮನೆ ನಮ್ಮದು. ನನಗೆ ಆಗ 6-7 ವರ್ಷ ಇರಬೇಕು ಮಳೆಗಾಲಕ್ಕೆ ಬೇಕಾದಷ್ಟು
ಒಣ ಸೌದೆ ಕಾರ್ ಷೆಡ್ನಲ್ಲಿ ತುಂಬಿರುತಿತ್ತು (ಕಾರ್ ಷೆಡ್ ಇತ್ತು ಕಾರು ಇರಲಿಲ್ಲ). ಕಾಡು ತೆರವು ಮಾಡಿದಾಗ ಕೆಳಗುರುಳಿ ಬಿದ್ದ ಮರಗಳೇ ಸಾಕು ಸೌದೆ ಒಟ್ಟಲು. ಜಡಿ ಮಳೆ ಬಂದರೆ ಚಾತುರ್ಮಾಸವೇ ಸರಿ. ಮನೆ ಹೊರಗೆ ಹೋಗುವಂತಿಲ್ಲ .ನಮ್ಮಮ್ಮನಿಗೆ ಬೇರೆ ಕೆಲಸವಿರುತ್ತಿರಲಿಲ್ಲ
ನಮಗೆಲ್ಲಾ ಅಭ್ಯಂಜನ ಮಾಡಿಸಿದ್ದೇ ಮಾಡಿಸಿದ್ದು.ಸೀಗೆಕಾಯಿ ಹರಳೆಣ್ಣೆಗೂ ಕೊರತೆ ಇರಲಿಲ್ಲ ಕಾಡಲ್ಲಿ ದೊರೆತ ಹರಳಿನಿಂದಲೇ ಕಮ್ಮನೆ ಹರಳೆಣ್ಣೆ ಮನೆಯಲ್ಲಿ ಇರುತಿತ್ತು,ಸೀಗೆಕಾಯಿ ನೆನಸಿ ಬೆಳ್ಳಂಬೆಳಗ್ಗೆಯೇ ರುಬ್ಬಿಟ್ಟಿರುತಿದ್ದರು. ನೀರು ಸಮೃದ್ದ ಸೂರಿನ ನೀರನ್ನೆ ದೋಣಿಯಲ್ಲಿ ಹರಿಸಿ ದೊಡ್ಡ ಸಿಮೆಂಟ್ ಟ್ಯಾಂಕ್ ತುಂಬರಿಸುತ್ತಿದ್ದರು
ಹಂಡೆ ಒಲೆ
ಸದಾ ನಿಗಿನಿಗಿ ಉರಿಯುತಿತ್ತು ಅದರದ್ದೆ ಕೆಂಡ ಎಳೆದು ಅದೂ ಇದು ಸುಟ್ಟು ತಿನ್ನುತ್ತಿದ್ದೆವು.
ಒಂದು ದಿನ ಬಚ್ಚಲೊಲೆಯಿಂದ ಪಟ ಪಟ ಪಟಾಕಿ ಸದ್ದು ಬಂತು. ಪಟಾಕಿ ಯೆಂದರೆ ಡಾಂಡೂಂ ಸದ್ದಲ್ಲ
ಲೇಡಿ ಪಟಾಕಿ ಅಥವಾ ಕುದರೆ ಪಟಾಕಿ ಸರ ಹಚ್ಚಿದ ಹಾಗೆ ಇಲ್ಲವೆ ಕೇಪನ್ನು ಹೊಡೆದ ಹಾಗೆ. ನಾವೆಲ್ಲ ಮೋಜಿನಿಂದ
ಒಲೆ ಬಳಿಸೇರಿದೆವು. ಹಿಂದಿನಿಂದ ಬಂದ ನಮ್ಮಮ್ಮ ಅಯ್ಯೋ ಯಾರೋ ಜಗಳಗಂಟಿ ಮರ ಕಡಿದು ಸೌದೆ ತಂದಿದ್ದಾರೆ
ಅದು ಮುಗಿಯುವವರೆಗೆ ಹೀಗೇ ಪಟಾಕಿ ಸದ್ದು ಎಂದು ನಗಲಾರಂಬಿಸಿದರು. ಇದೇನಿದು ಇಂಥ ಹೆಸರು ಎಂದಾಗ ಸ್ವಾರಸ್ಯಕರ
ಕಥೆ ಹೇಳಿದರು.
ಅದೊಂದು ಹಳ್ಳಿ. ಇಬ್ಬರು ಅಣ್ಣ ತಮ್ಮಂದಿರು. ಹೆಂಡತಿಯರ ಕಾರಣ ಪಾಲಾಗಿ ಗುಡಿಸಲಲ್ಲೆ ಅಡ್ಡಗೋಡೆ
ಹಾಕಿ ಬೇರೆ ಬೇರೆ ಒಲೆ ಹಾಕಿಕೊಂಡು ಜೀವನ ಮಾಡುತ್ತಿದ್ದರು. ಗಂಡಸರು ಕಷ್ಟ ಜೀವಿಗಳು ಶ್ರಮ ಜೀವಿಗಳು
ಕಷ್ಟಪಟ್ಟು ಎಳ್ಳು ಬೆಳೆದಿದ್ದರು. ಎಳ್ಳು ವಾಣಿಜ್ಯ ಬೆಳೆ. ರೈತನಿಗೆ ಬಹಳ ಹಣ ತಂದುಕೊಡುವ ಬೆಳೆ. ಆ ಕಾಲಕ್ಕೆ ಎಲ್ಲರೂ ಎಳ್ಳೆಣ್ಣೆಯನ್ನೇ
ಬಳಸುತಿದ್ದರು (ಎಳ್+ನೆಯ್= ಎಣ್ಣೆ, ತಿಲದಿಂದ ಬಂದದ್ದು ತೈಲ) ಚೆನ್ನಾಗಿ ಧಾರಣೆ ಬಂದಾಗ ಗಾಣಿಗನಿಗ
ಮಾರುವ ಎಂದು ಅಣ್ಣತಮ್ಮಂದಿರು ಎಳ್ಳು ಶೇಖರಿಸಿದ್ದರು.
ದೊಡ್ಡ ಸೊಸೆ ನಿಧಾನಸ್ಥೆ ಜತನ
ದಿಂದ ಸಂಸಾರ ಮಾಡುತಿದ್ದಳು. ಚಿಕ್ಕವಳು ಹೊಟ್ಟೆಕಿಚ್ಚಿನ ಹೆಂಗಸು . ಒಮ್ಮೆ ದೊಡ್ಡವನು ಕಾಡಿನಿಂದ
ಸೌದೆ ತರುವಾಗ ಜಗಳಗಂಟಿ ಮರವನ್ನೂ ಕಡಿದು ತಂದಿದ್ದನು.
ದೊಡ್ಡವಳು ಅಡಿಗೆಗೆ ಒಲೆಗೆ ಹಾಕಿದಾಗ ಅದರ ಬುದ್ದಿ ಅದು ತೋರಿಸಿತು. ಪಟ ಪಟ ಸದ್ದು . ಪಕ್ಕದ ಮನೆಯಲ್ಲಿ
ಏನಿದು ಸದ್ದು! ಹೋಗಿ ನೋಡುವಂತಿಲ್ಲ ಆಡಿ ಕೇಳುವಂತಿಲ್ಲ. ಕಿರಿಯಳಿಗೆ ಕಸಿವಿಸಿಯೋ ಕಸಿವಿಸಿ. ಎರಡು
ಮೂರು ದಿನ ಯೋಚಿಸಿದಳು.ಆಗ ಹೊಳೆಯಿತು ! ತನ್ನ ಗಂಡ ಇಲ್ಲದ ಹೊತ್ತಿನಲ್ಲಿ ದೊಡ್ಡ ಸೊಸೆ (ಓರಗಿತ್ತಿ)
ಎಳ್ಳು ಹುರಿದು ತಿನ್ನುತಿದ್ದಾಳೆ.ಅದಕ್ಕೆ ಹಾಗೆ ಸೊಂಪಾಗಿದ್ದಾಳೆ. ನಾನೇನು ಕಡಿಮೆ ಎಂದು
ಕಿರಿ ಸೊಸೆ ತಾನನೂ ದಿನಾಲೂ ಮುಷ್ಟಿ ಮುಷ್ಟಿ ಎಳ್ಳನ್ನು ಹುರಿದು ತಿಂದಳು.ಸೊಂಪಾಗಿಯೂ ಆದಳು. ಎಷ್ಟು ಎಂದರೆ ಗಂಡ ಹೊಡೆದರೂ ತಡೆದುಕೊಳ್ಳುವಷ್ಟು . ಆ ದಿನವೂ ಬಂದೇ ಬಿಟ್ಟಿತು.ಗಾಣಿಗ ಸೆಟ್ಟಿ ಒಳ್ಳೆ ಧಾರಣೆ ಕೊಡುತ್ತೀನೆಂದು ಮನೆ ಬಾಗಿಲಿಗೆ ಬಂದ ಅಣ್ಣ ಬುದ್ದಿವಂತ ಚೌಕಾಶಿ ಮಾಡಿ ದರ ನಿಗದಿ ಮಾಡಲಿ ಎಂದು ಅಣ್ಣನ ಮನೆಗೇ ಶೆಟ್ಟಿಯನ್ನು ಕಳುಹಿಸಿದ ತಮ್ಮ. ತಮಾಷೆ ನೋಡೋಣ ಎಂದು ಚಿಕ್ಕ ಸೊಸೆ ಹೊರಬಂದಳು.ಓರಗಿತ್ತಿ ಮೊದಲು ಏಟು ತಿನ್ನಲಿ ತನ್ನ ಸರದಿ ಬಂದಾಗ ನೋಡೋಣ ಎಂದು ಕೊಂಡಳು . ಅಣ್ಣ ತನ್ನ ಮನೆಗೆ ಒಂದಿಷ್ಟು ಇಟ್ಟುಕೊಂಡು ಎಲ್ಲಾ ಸರಕು ಮಾರಿದ. ಗಾಡಿಗೆ ಏರಿದ ಮೂಟೆ ನೋಡಿ
ಚಿಕ್ಕ ಸೊಸೆ ಎದೆ ಗಕ್ಕಂದಿತು . ತಮ್ಮ ಧಾರಣೆ ದರ ಕೇಳಿಕೊಂಡು ಎಳ್ಳು ಇಟ್ಟಿದ್ದ ದೊಡ್ಡ ಮಡಿಕೆ ನೋಡಿದರೆ ಏನಿದೆ. ಮೂರೋ ನಾಲ್ಕೋ ಸೇರು. ಕೆಂಗಣ್ಣು ಬಿಟ್ಟು ಕೇಳಿದಾಗ ತಾನೆ ಹುರಿದು ತಿಂದೆ ಎಂದು ಒಪ್ಪಿದಳು. ಇದಕ್ಕೆಲ್ಲ ಓರಗಿತ್ತಿಯೇ ಕಾರಣ ಎಂದು ದೂರಿದಳು ಹೆಂಡತಿಯನ್ನುಚೆನ್ನಾಗಿ ತದುಕಿದನಂತರ ಆದ ನಷ್ಟದ ದುಗುಡ ತಾಳಲಾರದೆ ಪಂಚಾಯತಿಯಲ್ಲಿ ಅಣ್ಣ ಅತ್ತಿಗೆಯ ಮೇಲೆ ತಮ್ಮ ದೂರನ್ನು ನೀಡಿದನು.ಪಂಚಾಯತಿ ಪರಿಶೀಲಿಸಲಾಗಿ ಜಗಳಗಂಟಿ ಮರದ ರಹಸ್ಯ ಹೊರಬಿತ್ತು.
ಆ ಜಾತಿಯ ಮರವನ್ನು ಕಡಿದು ಯಾರೂ ಸೌದೆ ಆಗಿ ಬಳಸಬಾರದೆಂದು ಎಲ್ಲರಿಗೂ ತಾಕೀತು ಮಾಡಿದರು . ಈಗ ಯಾರೂ ಅದನ್ನು ಸೌದೆಯಾಗಿ ಬಳಸುವುದಿಲ್ಲ.
ಅಂದಿನಿಂದ ಜಗಳಗಂಟಿ ಮರ ಎಂಬ ಹೆಸರು ಈ ಮರಕ್ಕೆ ಬಂತು. ಮೊದಲು ಏನು ಹೆಸರಿತ್ತೊ ಗೊತ್ತಿಲ್ಲ. ಕಿಟ್ಟಲ್ ತಿನ್ದುಕ, ಸ್ಫೂರ್ಜಕ, ಕಾಲಸ್ಕಂದ, ತಿತಸಾರಕ ಅಂದರೆ ತುಂಬರ ಗಿಡ, ತೂಬರೆಗಿಡ ಎಂಬ ಹೆಸರನ್ನು ನೀಡಿ . ಇದನ್ನು ಜಗಳದಮರವೆಂದು ಕೆಲವರು ಅನ್ನುವರು ಎಂದು ಬರೆದಿದ್ದಾರೆ.
ಕರ್ನಾಟಕ ಸಸ್ಯ ಸಂಪದದಲ್ಲಿ Diospyros montana ಎಂದು ಪ್ರಭೇದ ನಾಮ ಬರೆದಿದ್ದು-ಬುಲಗನಿ,ಕಾಲಾಗೊಂಡಾ,ಜಗಳಗಂಟಿ,ಬಿಲ್ಕುನಿಕ, ಕಲ್ನಂದಿ ಗೋಯಿಂಡು,ಕಾಲುಕತ್ತಿ ಎಂಬ ಹೆಸರನ್ನು ನೀಡಲಾಗಿದೆ.ಇದರ ಹಿಚುಕಿದ ಎಲೆ ಮತ್ತು ಫಲ ಮೀನ ವಿಷ ಎಂದು, ಕಟ್ಟಿಗೆಯನ್ನು ಮನೆಯಲ್ಲಿಟ್ಟರೆ ಜಗಳವಾಗುವುದೆಂಬ ಭಾವನೆ ಇದೆ ಎಂದು ಲೇಖಕ S.F.ಉಪ್ಪಿನ ಬರೆದಿದ್ದಾರೆ.
ಇಂಗ್ಲಿಷ್ ಹೆಸರು Green ebony parsiman ಎಂಬ ಹೆಸರಿದೆ.
ಇದನ್ನು ಕನ್ನಡದ ಮರ ಎಂದೆ ಆದರೆ ಇದು ಮಹಾರಾಷ್ಟ್ರ,ತಮಿಳುನಾಡು,ಆಂದ್ರಪ್ರದೇಶದಲ್ಲೂ ಬೆಳೆಯುತ್ತದೆ.ಆದರೆ ಜಗಳಗಂಟಿ ಎಂಬ ಹೆಸರು ಕರ್ನಾಟಕಕ್ಕೆ ಸೀಮಿತ.
ಚಿತ್ರಕೃಪೆ:http://indiabiodiversity.org/species/show/265560.
.
.