ರವೀಂದ್ರನಾಥ ಟಾಗೂರ್
ಕನ್ನಡಕ್ಕೆ : ಜೈಕುಮಾರ್ ಮರಿಯಪ್ಪ
ತನ್ನ ಮಂತ್ರಿಯನ್ನು ಕರೆದು " ಮೊದಲು ಗಿಣಿಗೆ ವಿದ್ಯಾಭ್ಯಾಸ ಮಾಡಿಸು." ಎಂದು ಆಜ್ಞೆ ನೀಡಿದ.
ಆ ಗಿಣಿಗೆ ವಿದ್ಯಾಭ್ಯಾಸ ಮಾಡಿಸುವ ಜವಾಬ್ದಾರಿ ರಾಜನ ಸೋದರಳಿಯನ ಮೇಲೆ ಬಿತ್ತು.
ಎಲ್ಲಾ ವಿದ್ವಾಂಸರು ಕುಳಿತು ಗಹನವಾದ ಚರ್ಚೆ ನಡೆಸಿದರು. ಚರ್ಚೆಯವಿಷಯ: ಈ ಗಿಳಿಯು ಇಷ್ಟು ಮೂರ್ಖ ಹಕ್ಕಿ ಆಗಲು ಕಾರಣವೇನು?
ಕಡೆಗೊಂದು ತೀರ್ಮಾನಕ್ಕೆ ಬಂದರು: "ಪುಳ್ಳೆ ಕಡ್ಡಿ ಗಳು ಮತ್ತು ಹುಲ್ಲಿನಿಂದ ಈ ಪಕ್ಷಿ ಕಟ್ಟುವ ಗೂಡಿನಲ್ಲಿ ಅಷ್ಟೊಂದು ಜ್ಞಾನವನ್ನು ಶೇಖರಿಸಲು ಸಾಧ್ಯವಿಲ್ಲ. ಆದರಿಂದ ಮೊದಲಿಗೆ ಅದಕ್ಕೊಂದು ಉತ್ತಮವಾದ ಪಂಜರವನ್ನು ನಿರ್ಮಿಸಬೇಕು".
ವಿದ್ವಾಂಸರಿಗೆ ಸೂಕ್ತ ಬಹುಮಾನ ನೀಡಲಾಯಿತು. ಅವರು ಸಂತೃಪ್ತರಾಗಿ ಮನೆಗೆ ಹೋದರು.
ಅಕ್ಕಸಾಲಿಗನೊಬ್ಬ ಪಂಜರವನ್ನು ನಿರ್ಮಿಸಲಾರಂಭಿಸಿದ. ಪಂಜರ ಬಲು ಸುಂದರವಾಗಿತ್ತು. ಅದನ್ನು ನೋಡಲು ಜನರು ಎಲ್ಲೆಲ್ಲಿಂದಲೋ ಬರಲಾರಂಭಿಸದರು .
ಒಬ್ಬ ಹೇಳಿದ " ವಿದ್ಯೆ ಎಂದರೆ ಇದು ! " ಇತರರು ಹೇಳಿದರು " ವಿದ್ಯೆನೋ ಅಲ್ಲವೋ ಅಂತೂ ಆ ಗಿಣಿಗೊಂದು ಒಳ್ಳೆ ಪಂಜರ ಸಿಕ್ತು ಬಿಡಿ. ಬಲು ಅದೃಷ್ಟವಂತ ಗಿಣಿ! "
ಅಕ್ಕಸಾಲಿಗಂತೂ ಯಥೇಚ್ಛ ಬಹುಮಾನ ನೀಡಿದರು. ಆತ ಸಂತೃಪ್ತನಾಗಿ ಮನೆಗೆ ನಡೆದನು.
ಪಂಡಿತನು ಗಿಣಿಗೆ ವಿದ್ಯಾಭ್ಯಾಸ ಮಾಡಿಸಲು ಬಂದನು. "ವಿದ್ಯಾಭ್ಯಾಸಕ್ಕೆ ಅಲ್ಪ ಸ್ವಲ್ಪ ಪುಸ್ತಕಗಳು ಸಾಲುವುದಿಲ್ಲ." ಎಂದನು.
ರಾಜನ ಸೋದರಳಿಯ ಲಿಪಿಕಾರರನ್ನು ಕರೆಸಿದನು. ಅವರು ದೊಡ್ಡ ದೊಡ್ಡ ಗ್ರಂಥಗಳನ್ನು ಪ್ರತಿ ಮಾಡಿದರು. ಆ ಪ್ರತಿಗಳಿಂದ ಇನ್ನೊಂದಷ್ಟು ಪ್ರತಿ ಮಾಡಿ ಗ್ರಂಥಗಳ ರಾಶಿಯನ್ನೇ ನಿರ್ಮಿಸಿದರು. ನೋಡಿದವರೆಲ್ಲಾ " ಅಬ್ಬಬ್ಬಾ ನೋಡು ವಿದ್ಯೆ ತುಂಬಿ ತುಳುಕುತ್ತಿದೆ" ಎಂದರು.
ಲಿಪಿಕಾರರಿಗೂ ಬಂಡಿಗಟ್ಟಳೆ ಬಹುಮಾನ ಸಿಕ್ಕಿತು. ಕೂಡಲೆ ಎಲ್ಲಾ ತಮ್ಮ ಮನೆಗೆ ದೌಡಾಯಿಸಿದರು. ಅವರ ಮಕ್ಕಳು ಮರಿ ಇಡೀ ಸಂತತಿಯೇ ಕುಳಿತು ತಿನ್ನುವಷ್ಟು ಸಂಪತ್ತು ದೊರಕಿತ್ತು.
ರಾಜನ ಸೋದರಳಿಯನು ಸುಮ್ಮನೆ ಕೂತಿರಲಿಲ್ಲ. ಅಂಥ ಅಮೂಲ್ಯ ಪಂಜರದ ಕಾವಲು ಮತ್ತು ನಿರ್ವಹಣೆಯ ಜವಾಬ್ದಾರಿ ಅವನ ಮೇಲಿತ್ತು. ಆಗಾಗ್ಗೆ ರಿಪೇರಿ ಮಾಡಿಸ ಬೇಕಿತ್ತು. ಅಷ್ಟೇ ಅಲ್ಲ ಪಂಜರವನ್ನು ತೊಳೆದು ಶುದ್ಧ ಮಾಡಿ ಪಾಲೀಶು ಮಾಡ ಬೇಕಿತ್ತು. "ಇದಪ್ಪಾ ಸುಧಾರಣೆ ಎಂದರೆ" ಎಂದು ಎಲ್ಲರೂ ತಲೆದೂಗಿದರು. ಪಂಜರದ ಉಸ್ತುವಾರಿಗೆಂದೇ ಅನೇಕ ಜನರನ್ನು ನೇಮಿಸಲಾಯಿತು. ಅವರ ಮೇಲೆ ಮೇಲ್ವಿಚಾರಣೆ ಮಾಡಲು ಇನ್ನೂ ಅನೇಕರನ್ನು ನೇಮಿಸಲಾಯಿತು. ಪ್ರತಿಯೊಬ್ಬರಿಗೂ ಪ್ರತಿ ತಿಂಗಳೂ ಮುಷ್ಟಿ ತುಂಬ ನಾಣ್ಯ ದೊರಕುತ್ತಿತ್ತು. ಅವರ ಪೆಠಾರಿಗಳು ತುಂಬಿ ತುಳುಕಿದವು. ಅವರು, ಅವರ ಅಣ್ಣ ತಮ್ಮಂದಿರು, ಅಕ್ಕತಂಗಿಯರು,
ಬಂಧು ಬಳಗದವರು ಸುಖ ಸಮೃದ್ಧಿಯಿಂದ ಜೀವನ ನಡೆಸಿದರು.
ಪ್ರಪಂಚದಲ್ಲಿ ಏನಾದರೂ ಇರಲಿ ಬಿಡಲಿ. ಆದರೆ ಎಲ್ಲದರಲ್ಲೂ ಹುಳುಕು ಕಂಡು ಹಿಡಿದು ಕೊಂಕು ನುಡಿಯುವರಿಗಂತೂ ಎಂದೂ ಕಡಿಮೆ ಇರುವುದಿಲ್ಲ. ಅವರು ಆಡಿಕೊಳ್ಳಲು ಪ್ರಾರಂಭಿಸಿದರು. "ಪಂಜರ ಏನೋ ಥಳಥಳ ಎನ್ನುತ್ತಿದೆ. ಆದರೆ ಹಕ್ಕಿ ಕಥೆ ಏನಾಯಿತಯ್ಯ? ಯಾರೂ ನೋಡುವವರೇ ಇಲ್ಲವಲ್ಲ!". ಈ ಕೊಂಕು ಮಾತು ರಾಜನ ಕಿವಿಗೂ ಬಿತ್ತು. ಆತ ಸೋದರಳಿಯನನ್ನು ಕರೆದು " ಏನಯ್ಯ ಇದು ಈ ರೀತಿ ಮಾತನಾಡುತ್ತಿದ್ದಾರೆ" ಎಂದನು.
ಸೋದರಳಿಯ ಹೇಳಿದ "ಮಹಾಸ್ವಾಮಿ ! ಸತ್ಯ ಏನು ಎಂದು ತಿಳಿಯಬೇಕಿದ್ದರೆ ದಯವಿಟ್ಟು ಅಕ್ಕಸಾಲಿಯನ್ನು ಕರೆಸಿ, ಪಂಡಿತರು-ಲಿಪಿಕಾರರನ್ನು ಕರೆಸಿ, ರಿಪೇರಿ ಮಾಡುವವನನ್ನು ಮತ್ತು ಮೇಲ್ವಿಚಾರಕರನ್ನು ಕರೆಸಿ ಕೇಳಿ ನೋಡಿ. ಕೊಂಕು ಮಾತನಾಡುವವರಿಗೇನು ಸ್ವಾಮಿ ಎರಡು ಹೊತ್ತು ಹಿಟ್ಟಿಗೆ ಗತಿಯಿಲ್ಲದಿದ್ದರೂ ಬಾಯಿಗೆ ಬಂದದ್ದು ಮಾತನಾಡುತ್ತಾರೆ."
ರಾಜನಿಗೆ ಎಲ್ಲವೂ ಸ್ಪಷ್ಟವಾಯಿತು. ಕೊರಳಿಂದ ಚಿನ್ನದ ಕಂಠೀಹಾರವನ್ನು ತೆಗೆದು ಸೊದರಳಿಯನಿಗೆ ಹಾಕಿ ತನ್ನ ಸೋದರಳಿಯನನ್ನು ಸನ್ಮಾನಿಸಿದನು.
ಯಾವ ಶರವೇಗದಲ್ಲಿ ವಿದ್ಯಾಭ್ಯಾಸ ನಡೆಯುತ್ತಿದೆ ಎಂಬುದನ್ನು ಕಣ್ಣಾರೆ ನೋಡಲು ರಾಜನು ಇಚ್ಛಿಸಿದನು. ಆದ್ದರಿಂದ ಒಂದು ದಿನ ತನ್ನ ಸ್ನೇಹಿತರು, ಪರಿವಾರ ಮತ್ತು ಸಭಾಸದರ ಸಮೇತ ವಿದ್ಯಾ ಕೇಂದ್ರಕ್ಕೆ ಹಾಜರಾದನು. ರಾಜ ಬಾಗಿಲಿಗೆ ಬಂದದ್ದೇ ತಡ ಗಂಟೆಗಳು, ಭೇರಿಗಳು ಮೊಳಗಿದವು, ಕೊಳಲು, ವೀಣೆ, ಪಿಟೀಲು, ಸಿತಾರ, ತಾಳ ಮದ್ದಳೆ ಮುಂತಾದ ಅನೇಕ ವಾದ್ಯಗಳು ನುಡಿದವು. ಪಂಡಿತರೋ ತಮ್ಮ ಜುಟ್ಟನ್ನು ಮೇಲೇರಿಸಿ ಉಚ್ಚ ಕಂಠದಲ್ಲಿ ವೇದಘೋಷ ಮಾಡತೊಡಗಿದರು. ರಿಪೇರಿ ಮಾಡುವವರು, ಕಾರ್ಮಿಕರು, ಅಕ್ಕಸಾಲಿಗ, ಲಿಪಿಕಾರರು, ಮೇಲ್ವಿಚಾರಕರು ಮತ್ತು ದಾಯಾದಿ ಮಿತ್ರರು ರಾಜನನ್ನು ಜಯಘೋಷದಿಂದ ಸ್ವಾಗತಿಸಿದರು. " ಮಹಾಪ್ರಭು ತಮ್ಮ ಅಭಿಪ್ರಾಯವೇನು?" ಎಂದು ಸೋದರಳಿಯನು ಕೇಳಿದನು "ಅದ್ಭುತ, ಮಹಾನ್ ಅದ್ಭುತ! ಇದೇನು ಸಾಮಾನ್ಯ ಶಬ್ದಘೋಷವೇ? " ಎಂದನು ಮಹಾರಾಜ.
" ಇದು ಕೇವಲ ಶಬ್ದ ಘೋಷ ಮಾತ್ರವಲ್ಲ ಮಹಾಸ್ವಾಮಿ ಇದಕ್ಕಾಗಿ ಸಾಕಷ್ಟು ಶ್ರಮ ಮತ್ತು ಹಣವೂ ವಿನಿಯೋಗ ಆಗಿದೆ" ಎಂದನು ಸೋದರಳಿಯ.
ರಾಜನು ಪೂರ್ಣ ಸಂಪ್ರೀತನಾಗಿ ಹಿಂದಿರುಗಲು ಸಿದ್ಧನಾದನು. ಅವನು ಮುಂಬಾಗಿಲಿಗೆ ಬಂದು ಇನ್ನೇನು ಆನೆಯ ಅಂಬಾರಿಯನ್ನು ಹತ್ತುವುದರಲ್ಲಿದ್ದನು. ಆಗ ಪೊದೆಯ ಹಿಂದೆ ಅಡಗಿ ಕುಳಿತಿದ್ದ ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುವ ಕುಹಕಿಯೊಬ್ಬ ಕೂಗಿ ಹೇಳಿದನು. " ಮಹಾ ಪ್ರಭು, ಹಕ್ಕಿಯನ್ನು ನೋಡಿದಿರಾ! " ರಾಜ ಬೆಚ್ಚಿ ಬಿದ್ದನು. " ಹೌದಲ್ಲಾ! ನಾನು ಮರತೇ ಬಿಟ್ಟಿದ್ದೇ. ಹಕ್ಕಿಯನ್ನೇ ನೋಡಲಿಲ್ಲವೇ?" ಅಂದು ಕೊಂಡು ಮತ್ತೇ ಒಳಗೆ ಹೋಗಿ ಪಂಡಿತನಿಗೆ ಹೇಳಿದನು " ನೀವು ಹೇಗೆ ವಿದ್ಯಾಭ್ಯಾಸ ಮಾಡಿಸುತ್ತೀರಿ ಎಂಬುದನ್ನು ನಾನು ನೋಡ ಬೇಕಲ್ಲಾ ! "ಎಂದನು.
ವಿದ್ಯಾಭ್ಯಾಸದ ರೀತಿಯನ್ನು ಕಣ್ಣಾರೆ ನೋಡಿದನು. ಅವನಿಗೆ ಮಹದಾನಂದವಾಯಿತು. ಹಕ್ಕಿಗಿಂತಲೂ ಆ ಪಾಠವನ್ನು ಮಾಡುವ ರೀತಿಯೇ ಬಹಳ ಮನೋಜ್ಞ ವಾಗಿತ್ತು, ಎಷ್ಟು ಅಂದರೆ, ಗಿಣಿಯ ಕಡೆಗೇ ಯಾರ ಗಮನವೂ ಹೋಗುತ್ತಿರಲಿಲ್ಲಾ. ಅಲ್ಲಾ ಅಷ್ಟಕ್ಕೂ ಹಕ್ಕಿ ಕಡೆಗಾದರೂ ಯಾಕೆ ನೋಡಬೇಕು ಹೇಳಿ !" ವ್ಯವಸ್ಥೆಯಲ್ಲಿ ಯಾವುದೇ ನ್ಯೂನತೆ ಇಲ್ಲ ಎಂಬುದು ರಾಜನಿಗೆ ಮನವರಿಕೆಯಾಯಿತು. ಪಂಜರದಲ್ಲಿ ಯಾವ ಕಾಳು ಕಡ್ಡಿಯೂ ಇರಲಿಲ್ಲ. ನೀರೂ ಇರಲಿಲ್ಲ. ಪಂಜರದ ತುಂಬ ಅನೇಕ ಗ್ರಂಥಗಳಿಂದ ಹರಿದ ಹಾಳೆಗಳಿದ್ದವು. ಲೇಖನಿಯ ತುದಿಯಿಂದ ಆ ಹಾಳೆಗಳನ್ನು ಹಕ್ಕಿಯ ಬಾಯಿಗೆ ತುರುಕಿ ಅದರ ಹೊಟ್ಟೆ ತುಂಬಿಸುತ್ತಿದ್ದರು. ಹಾಡುವುದಿರಲಿ ಕೂಗುವುದಕ್ಕೂ ಹಕ್ಕಿಯ ಬಾಯಲ್ಲಿ ಜಾಗವಿರಲಿಲ್ಲ. ಎಂಥ ಸುಂದರ ದೃಶ್ಯ!
ಈಗ ಆನೆಯ ಅಂಬಾರಿ ಏರುವ ಮುನ್ನ ರಾಜನು ಕಿವಿ ಕೀಳುವ ತಜ್ಞನನ್ನು ಕರೆಸಿ ಕೊಂಕು ನುಡಿಯ ಕುಹಕಿಯ ಕಿವಿಯನ್ನು ಜೋರಾಗಿ ಕೀಳಲು ಆಜ್ಞೆ ಮಾಡಿದನು.
ನಿರೀಕ್ಷಿಸಿದಂತೆ, ಬಲು ಗೌರವಾನ್ವಿತವಾಗಿ ಗಿಣಿಯು ಅರೆ ಜೀವವಾಯಿತು. ದಿನಗಳು ಹೀಗೆ ಕಳೆದವು. ಅದರ ಪಾಲಕರಿಗೆ ಪರಿಸ್ಥಿತಿ ಆಶಾದಾಯಕವಾಗಿ ಕಂಡಿತು. ಆದರೇನು ಮಾಡುವುದು. ಆ ಗಿಳಿಯು ತನ್ನ ಕೆಟ್ಟ ಚಾಳಿಯನ್ನು ಬಿಡಬೇಕಲ್ಲ! ಅರೆ ಜೀವವಾದರೂ ಗಿಳಿಯು ಮುಂಜಾವಿನ ಸೂರ್ಯನನ್ನು ಕಂಡು ಆಕ್ಷೇಪಾರ್ಹವಾಗಿ ರೆಕ್ಕೆ ಬಡಿಯುತ್ತಿತ್ತು. ಕೆಲವೊಂದು ದಿನ ಅದು ತನ್ನ ರೋಗಿಷ್ಠ ಕೊಕ್ಕುಗಳಿಂದ ಪಂಜರದ ಕಂಬಿಗಳನ್ನು ಮುರಿದು ಹೊರಬರಲು ಪ್ರಯತ್ನಿಸುತ್ತಿತ್ತು.
ಆಡಳಿತಗಾರನು "ಎಂಥ ದುರಹಂಕಾರ" ಎಂದನು. ಕೂಡಲೇ ಕಮ್ಮಾರನೊಬ್ಬ ಶಿಕ್ಷಣ ಇಲಾಖೆಗೆ ತನ್ನ ತಿದಿ ಒಲೆ ಮತ್ತು ಸುತ್ತಿಗೆ, ಉಳಿಗಳೊಂದಿಗೆ ಬಂದನು. ಎಷ್ಟು ಕುಶಲತೆಯಿಂದ ಕೆಲಸಮಾಡಿದ ಎನ್ನುತ್ತೀರಿ.
ಶೀಘ್ರವೇ ಕಬ್ಬಿಣದ ಸರಪಳಿಯನ್ನು ತಯಾರಿಸಿ ಬಿಟ್ಟನು ಮತ್ತು ಹಕ್ಕಿಯ ರೆಕ್ಕೆಯನ್ನು ಕತ್ತರಿಸಿ ಹಾಕಲಾಯಿತು.
ರಾಜನ ಬಂಧುಗಳಂತೂ ಗಂಭೀರವದನರಾಗಿ " ನೀವೇ ನೋಡಿ! ಈ ನಾಡಿನಲ್ಲಿ ಗಿಣಿಗಳು ಮೂಢ ಹಕ್ಕಿಗಳಷ್ಟೇ ಅಲ್ಲ ಅವಕ್ಕೆ ಎಳ್ಳಷ್ಟೂ ಕೃತಜ್ಞತೆ ಇಲ್ಲ " ಎಂದು ಬೇಸರದಿಂದ ತಲೆ ಆಡಿಸಿದರು. ನಂತರ ಪಂಡಿತರು ಒಂದು ಕೈಯಲ್ಲಿ ಲೇಖನಿ ಇನ್ನೊಂದರಲ್ಲಿ ಭರ್ಜಿ ಹಿಡಿದು ಬಂದು ವಿದ್ಯಾಭ್ಯಾಸ ಎಂದರೆ ಇದೇ ಎಂದು ಹೇಳಬಹುದಾದ ಕಾರ್ಯವನ್ನು ಮಾಡಿದರು.
ಕಮ್ಮಾರನಿಗೂ ಕೈ ತುಂಬ ಹಣ ಬಂತು. ಅವನ ಹೆಂಡತಿ ಮೈತುಂಬ ಒಡವೆ ತೊಟ್ಟಳು. ರಾಜನು ಆಡಳಿತಗಾರನಿಗೆ ಅವನ ಸಮಯ ಪ್ರಜ್ಞೆ ಮತ್ತು ಜಾಗೃತಿಯನ್ನು ಮೆಚ್ಚಿ ಬಿರುದುಗಳನ್ನು ಪ್ರದಾನ ಮಾಡಿದನು.
ಗಿಣಿಯು ತನ್ನ ಪ್ರಾಣ ಬಿಟ್ಟಿತು. ಯಾವಾಗ ಎಂಬುದು ಯಾರಿಗೂ ಗೊತ್ತಿಲ್ಲ. ಆ ಕುಹಕಿ ಕೊಂಕುಗಾರ ಮಾತ್ರ ಕೂಡಲೇ ಗಿಣಿ ಸತ್ತು ಹೋಯಿತು ಎಂದು ಎಲ್ಲೆಡೆ ಸುದ್ದಿಯನ್ನು ಹರಡಿದನು.
ರಾಜ ತನ್ನ ಸೋದರಳಿಯನನ್ನು ಕರೆದು " ಏನಪ್ಪಾ ಅಳಿಯ! ಏನಿದು ನಾನು ಕೇಳುತ್ತಿರುವುದು?" ಎಂದು ಕೇಳಿದನು. ಅಳಿಯ ಹೀಗೆ ಹೇಳಿದನು " ಮಹಾ ಪ್ರಭು ಗಿಣಿಯ ವಿದ್ಯಾಭ್ಯಾಸ ಇಲ್ಲಿಗೆ ಮುಗಿದಿದೆ."
"ಅದು ಇನ್ನೂ ಕುಣಿಯುತ್ತದೆಯೇ?" ರಾಜ ಕೇಳಿದನು
" ಛೆ! ಛೆ! ಎಲ್ಲಾದರೂ ಉಂಟೆ" ಅಳಿಯ ಹೇಳಿದನು.
" ಅದು ಹಾರುತ್ತದೆಯೇ?"
" ಇಲ್ಲವೇ ಇಲ್ಲ."
" ಹಾಡುಹಾಡುತ್ತದೆಯೇ"
"ಇಲ್ಲ ಸ್ವಾಮಿ"
"ಆಹಾರ ಬೇಕು ಎಂದು ಗಲಾಟೆ ಮಾಡುತ್ತದೆಯೇ?"
"ಇಲ್ಲ ಮಹಾಸ್ವಾಮಿ"
"ಗಿಣಿಯನ್ನು ಇಲ್ಲಿ ತನ್ನಿ ನಾನು ನೋಡ ಬೇಕು" ಎಂದು ರಾಜನು ಹೇಳಿದನು.
ಹಕ್ಕಿಯನ್ನು ತರಲಾಯಿತು. ಜೊತೆಗೆ ಆಡಳಿತಗಾರ, ಕಾವಲುಗಾರರು ಮತ್ತು ಅಶ್ವಾರೋಹಿಗಳೂ ಬಂದರು. ರಾಜನು ಗಿಣಿಯನ್ನು ಮುಟ್ಟಿದನು. ಅದು ಬಾಯಿ ತೆಗೆಯಲಿಲ್ಲ. ಒಂದು ನುಡಿಯನ್ನೂ ಆಡಲಿಲ್ಲ. ಅದರ ಹೊಟ್ಟೆಯಲ್ಲಿ ತುರುಕಿದ್ದ ಪುಸ್ತಕಗಳ ಪುಟಗಳು ಸರ ಸರ ಸದ್ದು ಮಾಡಿದವು ಅಷ್ಟೆ.
ಹೊರಗಡೆ ತೆಂಕಣ ತಂಗಾಳಿ, ಹೂ ಅರಳಿದ ವನಗಳು ವಸಂತಾಗಮನವನ್ನು ಸೂಚಿಸುತ್ತಿದ್ದವು. ಚಿಗುರೆಲೆಗಳ ನಿಟ್ಟುಸಿರು ಮುಗಿಲು ಮುಟ್ಟಿತು.

lansweeper crack
ಪ್ರತ್ಯುತ್ತರಅಳಿಸಿradmin crack
final cut pro x crack
teamviewer crack
malwarebytes anti malware crack